ನಾಗಾ ಬೆಟ್ಟಗಳು -
ಭಾರತ-ಬರ್ಮಾ ಗಡಿಯಲ್ಲಿರುವ, ಉತ್ತರ ಆರಕಾನ್ ಯೋಮ ಪರ್ವತವ್ಯವಸ್ಥೆಯ ಒಂದು ಭಾಗ. ಮಣಿಪುರ ರಾಜ್ಯದ ಎಲ್ಲೆಯ ಬಳಿ ಇರುವ ಜಾಪೊ (3,014 ಮೀ.) ಈ ಬೆಟ್ಟಗಳ ಉನ್ನತ ಶಿಖರ. ನಾಗಾ ಬೆಟ್ಟಗಳು ನಾಗಾಲ್ಯಾಂಡಿನ ಒಂದು ಭಾಗ. ಬರ್ಮದ ಉತ್ತರ ತುದಿಯಿಂದ ಅಸ್ಸಾಮಿನ ಉನ್ನತ ಪ್ರದೇಶದವರೆಗಿನ ಗಡಿ ರೇಖೆ ಪಾಟ್ಕೈ ಶ್ರೇಣಿಯ ಬೆನ್ನೇಣಿನ ಮೇಲೆ ಹಾದಿದೆ. ಈ ಶ್ರೇಣಿ ನೈಋತ್ಯದಿಂದ ಈಶಾನ್ಯಕ್ಕೆ ಸಾಗಿದೆ. ನಾಗಾ ಶ್ರೇಣಿಗಳು ಸ್ಥೂಲವಾಗಿ ಸಮಾಂತರವಾಗಿ ಹಬ್ಬಿದೆ. ದಕ್ಷಿಣದ ಕಡೆ ಜಾಪೊ ಶಿಖರದ ಸುತ್ತ ಗಂಟುಗೂಡಿವೆ. ನಾಗಾ ಬೆಟ್ಟಗಳು ಮುಖ್ಯವಾಗಿ ಮೂರನೆಯ ಭೂಯುಗದ ಶಿಲಾ ಮಡಿಕೆ ಶ್ರೇಣಿಗಳು. ಇವುಗಳ ಮೇಲೆ ಮಾನ್ಸೂನ್ ಮಳೆ ಹೇರಳವಾಗಿ ಬೀಳುವುದರಿಂದ ಇವು ದಟ್ಟವಾದ ನಿತ್ಯಹಸಿರು ಕಾಡುಗಳಿಂದ ಆವೃತವಾಗಿವೆ. ಕಾಡುಗಳನ್ನು ಸುಟ್ಟು ಬೇಸಾಯ ಮಾಡುವ ಪದ್ಧತಿಯಿಂದಾಗಿ ಹಲವು ಎಡೆಗಳಲ್ಲಿ ಮರಗಳು ನಾಶವಾಗಿ ಬಿದಿರುಮೆಳೆಗಳು ಬೆಳೆದಿವೆ.
(ನೋಡಿ- ನಾಗಾಲ್ಯಾಂಡ್)								
	(ಪಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ